ಕೆಂಪು ಕೊಕ್ಕರೆ

ಇಕ್ಸೊಟ್ರೈಕಸ್ ಜಾತಿಯ ಇಕ್ಸೈಲಿಸ್ ಮತ್ತು ಸಿನಮೋಮಿಯಸ್ ಪ್ರಭೇದಗಳಿಗೆ ಸೇರಿದ ಕೊಕ್ಕರೆಯಂಥ ಹಕ್ಕಿ (ಸಿಕೋನೈಯಿಫಾರ್ಮೀಸ್ ಗಣ, ಆರ್ಡೀಯಿಡೀ ಕುಟುಂಬ). ಭಾರತದಲ್ಲಿ ಸಿನಮೋಮಿಯಸ್ ಪ್ರಭೇದ ಇದೆ. ಬಿಟ್ಟರ್ನ್ ಹಕ್ಕಿ ವೈಜ್ಞಾನಿಕ ಹೆಸರು ಇಕ್ಸೋಟ್ರೈಕಸ್ ಸಿನಮೋಮಿಯಸ್ ದಕ್ಷಿಣ ಕೆನಡದಿಂದ ಹಿಡಿದು ದಕ್ಷಿಣ ಅಮೆರಿಕದ ವರೆಗೂ ವ್ಯಾಪಿಸಿದಂತೆ ಇ.ಎಕ್ಸೈಲಿಸ್ ಪ್ರಭೇದ ಕಂಡು ಬರುತ್ತದೆ. ಸಾಮಾನ್ಯವಾಗಿ ನೀರು ನಿಂತಿರುವ ಪ್ರದೇಶಗಳು ಹಾಗೂ ಬತ್ತದ ಗದ್ದೆಗಳಲ್ಲಿ ವಾಸಿಸುವ ಹಕ್ಕಿಯಿದು. ಕೊಳ ಮತ್ತು ಜವುಗು ಪ್ರದೇಶಗಳಲ್ಲಿರುವ ಎತ್ತರವಾದ ಹುಲ್ಲುಗಳ ಪೊದೆಗಳ ಮಧ್ಯೆ ವಾಸವಾಗಿರುತ್ತದೆ. ಬಹಳ ಪುಕ್ಕಲು ಸ್ವಭಾವದ ಈ ಹಕ್ಕಿ ಇತರರ ಕಣ್ಣಿನಿಂದ ತಪ್ಪಸಿಕೊಳ್ಳುವುದಕ್ಕಾಗಿ ನೀರಿನಲ್ಲಿರುವ ಗಿಡಗಳ ಮಧ್ಯೆ ಓಡಾಡುವುದಲ್ಲದೆ ಗಿಡಗಳ ಮೇಲೇರಿ ಅಡಗಿಕೊಳ್ಳುತ್ತದೆ. ಕೆಲವು ಸಾರಿ ತನ್ನ ದೇಹ ಮತ್ತು ಕೊಕ್ಕನ್ನು ನೆಟ್ಟಗೆ ಮೇಲಕ್ಕೆತ್ತಿಕೊಂಡು ಹೆಪ್ಪುಗಟ್ಟಿದಂತೆ ನಿಶ್ಚಲವಾಗಿ, ನೀರಿನಲ್ಲಿರುವ ಜೊಂಡನ್ನು ಹೋಲುವಂತೆಯೇ ನಟಿಸಿ ನಿಂತುಕೊಳ್ಳುತ್ತದೆ. ಹಾಗೆ ಅಲುಗಾಡದೆ ನಿಂತಿದ್ದರೂ ತನ್ನ ಕಣ್ಣುಗಳನ್ನು ನಿಧಾನವಾಗಿ ಚಲಿಸುತ್ತ ಸುತ್ತಲೂ ನೋಡುತ್ತದೆ. ಈ ಚಲನೆ ತಿರುಗಣಿ ಮಣೆ ತಿರುಗುವ ಹಾಗೆ ಇರುತ್ತದೆ.

ಕೆಂಪು ಕೊಕ್ಕರೆ ಸುಮಾರು 15" ಉದ್ದದ ಸಣ್ಣ ಗಾತ್ರದ ಹಕ್ಕಿ. ಗಂಡುಹಕ್ಕಿಯ ಮೇಲ್ಭಾಗದ ಗರಿಗಳು ಮತ್ತು ತಲೆಯ ಪಕ್ಕಗಳು ಕೆಂಪು ಮಿಶ್ರಿತ ಕಂದುಬಣ್ಣದವು. ಗಂಟಲು ಮತ್ತು ಕೆಳಭಾಗದ ಗರಿಗಳು ಕಿತ್ತಳೆಮಿಶ್ರಿತ ಕಂದು ಬಣ್ಣದವು. ಗಂಟಲಿನ ಎರಡು ಕಡೆ ಬಿಳಿಯ ಗೆರೆಯಿದೆ. ಕತ್ತಿನ ಮುಂಭಾಗದಲ್ಲಿ ಕೆಳಕ್ಕೆ ಚಾಚಿಕೊಂಡಿರುವ ಹಾಗೆ ಕಂದುಬಣ್ಣದ ಗೆರೆಯಿದೆ. ಹೆಣ್ಣು ಹಕ್ಕಿ ಮಾಸಲು ಬಣ್ಣದ್ದು.

ಇದರ ಪ್ರಧಾನ ಆಹಾರ ಮೀನು. ಕೆಲವು ಸಾರಿ ಸಣ್ಣ ಸಣ್ಣ ಹಕ್ಕಿ, ಹಲ್ಲಿ, ಹಾವು, ಕಪ್ಪೆ, ಮಿಡತೆ, ಮೃದ್ವಂಗಿಗಳು, ಸೀಗಡಿ, ಏಡಿ ಮುಂತಾದವನ್ನು ತಿನ್ನುತ್ತದೆ. ಮೊಟ್ಟೆಯಿಡುವುದು ಮಳೆಗಾಲದಲ್ಲಿ. ಪ್ರತಿ ಸೂಲಿಗೂ 4 ಮೊಟ್ಟೆಗಳನ್ನಿಡುತ್ತದೆ. ಬತ್ತದ ಗದ್ದೆಗಳಲ್ಲಿ ಈ ಹಕ್ಕಿಗಳು ಹೇರಳವಾಗಿ ಗೂಡುಗಳನ್ನು ಕಟ್ಟುತ್ತವೆ. ಕೊಳಗಳ ಬಳಿ ನೇತಾಡುತ್ತಿರುವ ಪೊದರುಗಳು ಅಥವಾ ಎತ್ತರವಾದ ಜೊಂಡುಗಳ ಮಧ್ಯೆ ಹುಲ್ಲು ಅಥವಾ ಹುಲ್ಲಿನ ಜೊತೆಗೆ ಬತ್ತದ ಕಡ್ಡಿಗಳನ್ನು ಸೇರಿಸಿ ಗೂಡು ಕಟ್ಟುತ್ತದೆ. 		

(ಕೆ.ಪಿ.ಆರ್.)
									(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ